ಅಣ್ಣಿಗೇರಿ
ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಮುಖ್ಯ ಊರು. ಹುಬ್ಬಳ್ಳಿ-ಗುಂತಕಲ್ಲು ರೈಲುಮಾರ್ಗದ ಮೇಲೆ ಹುಬ್ಬಳ್ಳಿಯಿಂದ 35ಕಿಮೀ ದೂರದಲ್ಲಿದೆ. ಗದಗ-ಹುಬ್ಬಳ್ಳಿ ಹೆದ್ದಾರಿ ಈ ಊರ ಮೇಲಿಂದ ಹಾದುಹೋಗುತ್ತದೆ. ಕೃತಪುರಮಹಾತ್ಮೆ ಎಂಬ ಸ್ಥಳಪುರಾಣದ ಪ್ರಕಾರ ಈ ಊರಿಗೆ ಅನ್ನಗಿರಿ, ಅನ್ಯತಟಾಕ ಎಂಬ ಹೆಸರುಗಳಿದ್ದುವು. ಪಾಂಡವರು ಅಣ್ಣಿಗೇರಿಗೆ ಬಂದಿದ್ದರೆಂಬ ನಂಬಿಕೆಯಿದೆ. 2ನೆಯ ಪುಲಕೇಶಿಯಿಂದ ಹಿಡಿದು ಬಿಜಾಪುರದ ಮಹಮ್ಮದ್‍ಷಾನ ಕಾಲದ ವರೆಗೆ ಆಳಿದ ರಾಜಮನೆತನಗಳವರ 28 ಶಾಸನಗಳು ಇಲ್ಲಿ ದೊರಕಿವೆ. ಅಣ್ಣಿಗೇರಿ ಪ್ರಾಚೀನ ಕಾಲದಲ್ಲಿ ಸಾಂಸ್ಕøತಿಕ ಮತ್ತು ಧಾರ್ಮಿಕ ಮಹತ್ತ್ವ ಪಡೆದಿತ್ತೆಂದು ಆ ಶಾಸನಗಳಿಂದ ತಿಳಿದುಬರುತ್ತದೆ. ಇದು ಬೆಳ್ವೊಲ 300ರ ನಾಡಿನ ರಾಜಧಾನಿಯಾಗಿತ್ತು. ದಕ್ಷಿಣ ವಾರಾಣಸಿ ತೀರ್ಥವೆಂದೂ ಕರೆಯುತ್ತಿದ್ದ ಈ ಊರಲ್ಲಿ ಐದು ಬ್ರಹ್ಮಪುರಿಗಳೂ ತ್ರಿವರ್ಗದವರೂ ಸಾವಿರ ದೇವಪುತ್ರರೂ ಇದ್ದರು. ಪಂಪನ ಮಾತಾಮಹಜೋಯಿಸ ಸಿಂಗ ಇಲ್ಲಿಯವನು. 
	
ಚಾಳುಕ್ಯ 4ನೆಯ ಸೋಮೇಶ್ವರನಿಗೆ ಪುನಃ ರಾಜ್ಯವನ್ನು ಸಂಪಾದಿಸಲು ಸಹಾಯ ಮಾಡಿದ ದಂಡನಾಯಕ ಬಮ್ಮಿದೇವ ಮತ್ತು ಕಳಚುರಿ ರಾಯಮುರಾರಿ ಸೋವಿದೇವನ ದಂಡನಾಯಕ ಧನ್ನುಗಿ ಅಣ್ಣಿಗೇರಿಯಲ್ಲಿದ್ದವರು. ಕಳಚುರಿ ಬಿಜ್ಜಳನಿಗೆ ಹೆದರಿ ಚಾಳುಕ್ಯ 3ನೆಯ ತೈಲ ಅಣ್ಣಿಗೇರಿಗೆ ಓಡಿಬಂದಿದ್ದ. ಬ್ರಿಟಿಷರ ಆಳ್ವಿಕೆಯ ಪ್ರಾರಂಭದಲ್ಲಿ ಇದು ನಿಪ್ಪಾಣಿ ಜಹಗೀರಿಯಲ್ಲಿತ್ತು. 1839ರಲ್ಲಿ ಇದು ಕಂಪನಿಯ ನೇರ ಆಳ್ವಿಕೆಗೆ ಸೇರಿತು.
	
ಅಣ್ಣಿಗೇರಿಯಲ್ಲಿ ಬನಶಂಕರಿ, ಬಸಪ್ಪ, ಗಚ್ರ್ಚಿಬಸಪ್ಪ, ಕೋಳಿವಾಡ ಹನುಮಪ್ಪ, ಮೈಲಾರ, ಪುರದ ವೀರಪ್ಪ ಮೊದಲಾದ ಗುಡಿಗಳಿವೆ. ಇಲ್ಲಿರುವ ಅಮೃತೇಶ್ವರ ಗುಡಿ ಎಲ್ಲಕ್ಕೂ ದೊಡ್ಡದು ಮತ್ತು ಊರಿನ ಮುಖ್ಯ ದೇವಾಲಯ. ಹಸುರು ಮೋಡಿಯ ಕರಿಯ ಕಲ್ಲಿನಲ್ಲಿ ಕಲ್ಯಾಣ ಚಾಳುಕ್ಯರ ಕಾಲದ ಶಿಲ್ಪಶೈಲಿಯಲ್ಲಿ ಇದನ್ನು ಕಟ್ಟಿದೆ. ಈ ಗುಡಿಯಲ್ಲಿ ಸ್ವಯಂಭು ಅಮೃತೇಶ್ವರ ಲಿಂಗವುಳ್ಳ ಗರ್ಭಗುಡಿ, ಅದರ ಮುಂದೆ ಸುಕನಾಸಿ, ಅದರ ಮುಂದೆ ನಾಲ್ಕು ದಪ್ಪ ಮತ್ತು ದುಂಡಾದ ಕಂಬಗಳುಳ್ಳ ಒಳಮಂಟಪ, ಮುಖಮಂಟಪ ಮತ್ತು ಮಹಾಮಂಟಪಗಳಿವೆ. ಮುಖಮಂಟಪದ ಛತ್ತನ್ನು ಎತ್ತಿಹಿಡಿದ ಕಂಬಗಳು ಬೇರೆ ಬೇರೆ ಆಕಾರವಾಗಿವೆ. ಅವು ಇಟ್ಟಗಿಯ ಪ್ರಾಚೀನ ಗುಡಿಯಲ್ಲಿಯ ಕಂಬಗಳನ್ನೂ ಸ್ವಲ್ಪಮಟ್ಟಿಗೆ ಡಂಬಳದ ದೊಡ್ಡ ಬಸಪ್ಪನ ಗುಡಿಯ ಮುಖಮಂಟಪದ ಕಂಬಗಳನ್ನೂ ಹೋಲುವವು. ಮಹಾಮಂಟಪದೊಳಗಿಂದ ಒಳಮಂಟಪದೊಳಗೆ ಪ್ರವೇಶಿಸುವಲ್ಲಿ ಇರುವ ಶಿಲಾದ್ವಾರ ನಾಗ-ನಾಗಿಣಿ ಮುಂತಾದ ಕೆತ್ತನೆಗಳಿಂದ ಸುಂದರವಾಗಿ ಅಲಂಕೃತವಾಗಿದೆ. ಇಲ್ಲಿ ಚಿತ್ರಗಳನ್ನು ಪೆÇಳ್ಳುಮಾಡಿ ಅವು ಪ್ರತ್ಯೇಕವಾಗಿ ನಿಂತಂತೆ ಭಾಸವಾಗುವ ಹಾಗೆ ಕೆತ್ತಿದೆ. ಇಲ್ಲಿಯ ಕಲಾಕುಸುರಿನ ಕೆಲಸ ಅತ್ಯಂತ ಪ್ರೇಕ್ಷಣೀಯ. ವಿಮಾನ ಮತ್ತು ಒಳಮಂಟಪದ ಹೊರಗೋಡೆಗಳ ಮೇಲೆ ಕಲಶ, ದೇವತೆಗಳು, ಮಂಗಗಳು, ನೃತ್ಯಗಣಪತಿ, ಮಕರದ ಹರನಾಳಿಗೆ ಮೊದಲಾದವೂ ಶಿವನ ಹಲವು ರೂಪುಗಳೂ ಇವೆ. 
	
ಕೆಲವು ಕಂಬಗಳ ಮೇಲೆ ಮಹಾಮಂಟಪ ನಿಂತಿದೆ. ಅಲ್ಲಿ ನಂದಿಯ ಮೂರ್ತಿ ಇದೆ. ದೇವಾಲಯದ ಸುತ್ತ ಪ್ರಾಕಾರವೂ ಸಣ್ಣ ಗುಡಿಗಳೂ ಇವೆ. 
	
ಈ ಊರ ಜೈನ ಬಸ್ತಿಯೂ ದೊಡ್ಡದು. ಅದರ ಮುಂದೆ ಕಲ್ಲಿನ ಮಹಾದ್ವಾರವಿದೆ. ಊರ ಹೊರಗೆ ಪೂರ್ವಭಾಗದಲ್ಲಿದ್ದ ಪ್ರಾಚೀನ ಗುಡಿಯ ಹೊರಗೋಡೆಗಳ ಮೇಲೆ ವಿಜಯನಗರ ಕಾಲದ ಶಿಲ್ಪವನ್ನು ನೋಡಬಹುದು. 	
			  
(ಎ.ಎಂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ